ಅಧಿಕಾರಹಂಚಿಕೆ

ಒಂದು ರಾಜ್ಯ ತನ್ನ ಅಧಿಕಾರಸೂತ್ರಗಳನ್ನು ಕೇಂದ್ರೀಕರಿಸಿಕೊಂಡಿರಬಹುದು ಅಥವಾ ಪ್ರಾಂತಗಳ ನಡುವೆ ವಿಭಜನೆ ಮಾಡಿಕೊಂಡಿರಬಹುದು. ಇಂಥ ಕ್ರಮಬದ್ಧವಾದ ವಿಭಜನಾ ವ್ಯವಸ್ಥೆಯೇ ಅಧಿಕಾರ ಹಂಚಿಕೆ (ಡಿಸ್ಟ್ರಿಬ್ಯೂಷನ್ ಆಫ್ ಪವರ್ಸ್). ಈ ಅಧಿಕಾರ ವಿಭಜನೆ ಆ ರಾಜ್ಯ ವ್ಯವಸ್ಥೆಯ ತಳಹದಿಯ ಮೇಲೆ ನಿಂತಿದೆ. ಅಧಿಕಾರವಿಭಜನೆ ನಡೆದ ಮೇಲೆ ಅದನ್ನು ಸುಲಭವಾಗಿಯೂ ಸಂಯುಕ್ತರಾಜ್ಯದ ಅಂಗಗಳ ಒಮ್ಮತವಿಲ್ಲದೆಯೂ ಬದಲಾಯಿಸಲು ಸಾಧ್ಯವಿರುವುದಿಲ್ಲ.
	
ರಾಜ್ಯವ್ಯವಸ್ಥೆ ಮೂರು ವಿಧಗಳಲ್ಲಿ ಅಧಿಕಾರವಿಭಜನೆ ಮಾಡಿಕೊಂಡಿರುವುದನ್ನು ನೋಡಬಹುದು. ಉದಾಹರಣೆಗೆ, 1. ಅಮೆರಿಕದ ರಾಜ್ಯದ ವ್ಯವಸ್ಥೆಯಲ್ಲಿ ಸಂಯುಕ್ತ ಸರ್ಕಾರಕ್ಕೆ ನಿರ್ದಿಷ್ಟವಾದ ಅಧಿಕಾರಗಳನ್ನು ನಿರ್ದೇಶಿಸಿದೆ; ಉಳಿದ ಅಧಿಕಾರಗಳೆಲ್ಲವನ್ನೂ ಪ್ರಾಂತಸರ್ಕಾರಗಳಿಗೆ ಬಿಟ್ಟಿದೆ. 2. ಕೆನಡ ಸಂಯುಕ್ತಸರ್ಕಾರದಲ್ಲಿ ಇದಕ್ಕೆ ವಿರುದ್ಧವಾದ ರಚನೆಯಿದೆ. ಅಂದರೆ, ನಿರ್ದಿಷ್ಟವಾದ ಅಧಿಕಾರಗಳನ್ನು ಪ್ರಾಂತಗಳಿಗೆ ಕೊಟ್ಟು ಮಿಕ್ಕ ಅಧಿಕಾರಗಳನ್ನು ಸಂಯುಕ್ತಸರಕಾರಕ್ಕೆ ಕೊಟ್ಟಿದೆ. 3. ಭಾರತದಲ್ಲಿ ಈ ರಚನೆಯೇ ಬೇರೆಯಾಗಿದೆ. ಇಲ್ಲಿ ಅಧಿಕಾರವನ್ನು ಮೂರು ವಿಧದಲ್ಲಿ ವಿಭಜನೆ ಮಾಡಲಾಗಿದೆ. ಯೂನಿಯನ್ ಲಿಸ್ಟ್: ಇಲ್ಲಿ ಸಂಯುಕ್ತ ಸಾಮ್ರಾಜ್ಯಕ್ಕೆ ನಿರ್ದಿಷ್ಟವಾದ ವಿಷಯಗಳನ್ನು ತಿಳಿಸಿದೆ. ಸ್ಟೇಟ್ ಲಿಸ್ಟ್: ಇಲ್ಲಿ ರಾಜ್ಯಗಳಿಗೆ ನಿರ್ದೇಶಿಸಿದ ವಿಷಯಗಳನ್ನು ನಮೂದಿಸಿದೆ. ಕನ್‍ಕರೆಂಟ್ ಲಿಸ್ಟ್: ಇಲ್ಲಿ ಒಕ್ಕೂಟ ಮತ್ತು ರಾಜ್ಯಗಳೆರಡಕ್ಕೂ ಸಂಬಂಧಪಟ್ಟ ವಿಷಯಗಳನ್ನು ನಮೂದಿಸಿದೆ.
ಎಲ್ಲ ರಾಜ್ಯವ್ಯವಸ್ಥೆಯಲ್ಲೂ ಕೇಂದ್ರ ಮತ್ತು ಅಂಗಗಳ ಮಧ್ಯೆ ಸಂಭವಿಸಬಹುದಾದ ವಿವಾದಗಳನ್ನು ಅಂತಿಮವಾಗಿ ಬಗೆಹರಿಸಲು ಒಂದು ನ್ಯಾಯಾಸ್ಥಾನವಿರುತ್ತದೆ (ಸುಪ್ರೀಂಕೋರ್ಟ್).						
(ಕೆ.ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ